ಉತ್ತರ ಕನ್ನಡದ ಸುಗ್ಗಿ ಹಬ್ಬ
ಈಗ ಸುಗ್ಗಿ ಕುಣಿತದ ಸಮಯ. ಉತ್ತರ ಕನ್ನಡದಲ್ಲಿ, ವಿಶೇಷ ವಾಗಿ ಕರಾವಳಿ ತಾಲೂಕುಗಳಾದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ತಾಲೂಕುಗಳಲ್ಲಿ ಆಚರಣೆಯಲ್ಲಿರುವ ಅತ್ಯಂತ ವಿಶಿಷ್ಟ ಜಾನಪದ ನೃತ್ಯದ ಪ್ರಕಾರವೇ ಸುಗ್ಗಿ ಕುಣಿತ. ಹೋಳಿ ಹುಣ್ಣಿಮೆಯ ಏಳೆoಟು ದಿನಗಳ ಮೊದಲಿನಿಂದ ಆರಂಭವಾಗಿ, ಹೋಳಿ ಹುಣ್ಣಿಮೆಯಂದು ಕರಿ ಮೀಯುವುದರ ಜತೆಗೆ ಕೊನೆಗೂಳ್ಳುತ್ತದೆ. ಬೇರೆ ಬೇರೆ ಜನಾಂಗದವರ ಸುಗ್ಗಿ ಮೊದಲೆಲ್ಲ ಪ್ರಚಲಿತ ಇದ್ದರೂ ಹಾಲಕ್ಕಿ ಒಕ್ಕಲಿಗರ (ಗೌಡರ) ಸುಗ್ಗಿ ಹೆಚ್ಚು ಆಕರ್ಷಕ ಮತ್ತು ಪ್ರಮುಖವಾದುದು. ಇದು ಕೇವಲ ಕುಣಿತವಲ್ಲ ಆಚರಣೆಯೂ ಹೌದು. ಜಾನಪದ ಹಾಡನ್ನು ಕೊರಸ್ ಲ್ಲಿ ಹಾಡುತ್ತ, ಗುಮಟೆ, ಜಾಗಟೆ ಬಾರಿಸುತ್ತ ಮನೆ ಮನೆಗೆ ಹೋಗಿ ಪ್ರದರ್ಶನ ನೀಡುತ್ತಾರೆ. ಈ ಸುಗ್ಗಿ ಕುಣಿತಕ್ಕೆ ನವಿಲುಗರಿ, ಮಲ್ಲಿಗೆ ಹಾಗೂ ವಿವಿಧ ಬಗೆಯ ಹೂ, ಬಣ್ಣದ ಕಾಗದ, ರಿಬ್ಬನ್, ತೆಂಗಿನ ಗರಿಯ ಕಡ್ಡಿಯನ್ನು ಬಳಸಿ ಮುಂಡಾಸು, ತುರಾಯಿ ಕಟ್ಟುತ್ತಾರೆ. ಯಕ್ಷಗಾನದ ವೇಷ ಭೂಷಣ ಹಾಕಿರುತ್ತಾರೆ. ಜತೆಗೆ ಹಾಸ್ಯ ಪಾತ್ರಗಳಾಗಿ ಹನುಮಂತ, ಕರಡಿ, ಹುಲಿ ವೇಷಗಳು ತಾಳಕ್ಕೆ ತಕ್ಕಂತೆ ನರ್ತಿಸುತ್ತವೆ. ಶುರುವಿನಲ್ಲಿ "ಬೊ ಹೋ ಚೋಯ್ " ಎಂದು ಲಯಬದ್ದವಾದ ಕುಂಚದ ಕುಣಿತ, ನಂತರ ಜಾನಪದ ಅಥವಾ ಹೊಸ ಹೊಸ ಪದ್ಯಗಳ ಜತೆ ಕೋಲಾಟ ಕುಣಿತ, ಮತ್ತೆ ಬೇರೆ ಬೇರೆ ವೇಷಗಳಿಂದ ಸಂಪ್ರದಾಯಿಕ ಸುಗ್ಗಿ ಕುಣಿತ ಪ್ರದರ್ಶನ ಇರುತ್ತದೆ.🎉